ಬ್ರೂನೆಲ್, ಮಾರ್ಕ್ ಇಜಂಬಾರ್ಡ್
1769-1849. ಉಕ್ಕು, ಕಾಂಕ್ರೀಟು ವಾಸ್ತುಶಿಲ್ಪಗಳಿಗೆ ಸ್ಫೂರ್ತಿ ನೀಡಿದ ಎಂಜಿನಿಯರ್ ಮತ್ತು ಉಪಜ್ಞೆಕಾರ. ಫ್ರಾನ್ಸಿನ ರೂನ್ ನಗರದ ಸಮೀಪ ಜನಿಸಿದ ಮಾರ್ಕ್ ಆರು ವರ್ಷ ಫ್ರೆಂಚ್ ನೌಕಾದಳದಲ್ಲಿ ಸೇವೆ ಸಲ್ಲಿಸಿದ. ರಾಜಸತ್ತೆಗೆ ಸಹಾನುಭೂತಿ ತೋರಿದ್ದರಿಂದ ಫ್ರೆಂಚ್ ಕ್ರಾಂತಿಯ ವೇಳೆ ದೇಶತ್ಯಾಗ ಮಾಡಿ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಹೋದ. ನ್ಯೂಯಾರ್ಕಿನ ಮುಖ್ಯ ಎಂಜಿನಿಯರನಾಗಿ ಸ್ಟೇಟನ್ ಐಲೆಂಡ್ ಮತ್ತು ಲಾಂಗ್ ಐಲೆಂಡ್ ಮಧ್ಯೆ ಇರುವ ಕಾಲುವೆಯ ರಕ್ಷಣಾ ವ್ಯವಸ್ಥೆ ಸುಧಾರಿಸಿದ. ತೋಪು ತಯಾರಿಸುವ ಎರಕ ಶಾಲೆ ಕಟ್ಟಿದ. ಶಾಂಪ್ಲೆ ಸರೋವರದಿಂದ ಹಡ್ಸನ್ ನದಿ ವರೆಗಿನ ಕಾಲುವೆಯ ಸರ್ವೇಕ್ಷಣೆ ನಡೆಸುವುದಕ್ಕೆ ನೇಮಿತನಾದ (1794).

	ಅಮೆರಿಕದಿಂದ ಇಂಗ್ಲೆಂಡಿಗೆ 1799ರಲ್ಲಿ ಬಂದವನು ಮದುವೆಯಾಗಿ ಲಂಡನ್ನಿನಲ್ಲಿ ನೆಲಸಿದ. ಯಂತ್ರಗಳಿಂದ ಹಡಗು ರಾಟೆಗಳನ್ನು ತಯಾರಿಸುವುದರೊಂದಿಗೆ ಬ್ರೂನೆಲ್ ಯಾಂತ್ರೀಕೃತ ಬೃಹದುತ್ಪಾದನೆ ಕೂಡ ಕೈಗೊಂಡ. ಕೆಲಸದ ಹಂಚಿಕೆ ಮತ್ತು ಪ್ರಮಾಣೀಕೃತ ಬಿಡಿಭಾಗಗಳ ತಯಾರಿಯನ್ನು ರೂಢಿಗೆ ತಂದ. ಇದರಿಂದ ಹಡಗು ರಾಟೆ ಮಾಡುವ 110 ಜನರ ಕೆಲಸವನ್ನು ಯಂತ್ರಗಳ ಸಹಾಯದಿಂದ ಕೇವಲ 10 ಜನ ಮಾಡುವಂತಾಯಿತು. ಬೂಟ್ ಮತ್ತು ಕಾಲುಚೀಲ ತಯಾರಿಸುವ ಯಂತ್ರ, ಹೆಣೆಯುವ ಮತ್ತು ಮುದ್ರಿಸುವ ಯಂತ್ರ ಈತ ತಯಾರಿಸಿದ ಇತರ ಕೆಲವು ಯಂತ್ರಗಳು.

	ಈತನ ಮರಸಿಗಿಯುವ ಕಾರ್ಖಾನೆಗಳಿಗೆ ಬೆಂಕಿ ಬಿದ್ದಾಗ ಇವನು ದಿವಾಳಿಯಾಗಿ (1821) ತೀರದ ಸಾಲಕ್ಕಾಗಿ ಬಂದೀಖಾನೆಗೆ ಹೋಗಬೇಕಾಯಿತು. ಅದರೆ ಸರಕಾರಿ ಅನುದಾನ ಪಡೆದು ಬಿಡುಗಡೆಗೊಂಡ. ಮುಂದೆ ಸಿವಿಲ್ ಎಂಜಿನಿಯರನಾಗಿ ಏಲ್‍ನ ಬೂರ್ಬೋನ್ ತೂಗು ಸೇತುವೆ. ಲಿವರಪೂಲಿನ ತೇಲು ಹಡಗು ಕಟ್ಟೆ ಹಾಗೂ ನೀರು ಒಸರುವ ಕೆಳಸ್ತರಗಳಲ್ಲಿ ಕೆಲಸ ಮಾಡಲು ಸುರಂಗ ಅಡ್ಡಣೆಗಳನ್ನು (ಚಾನೆಲಿಂಗ್ ಷೀಲ್ಡ್ಸ್) ರೂಪಿಸಿದ. 1825ರಲ್ಲಿ ಮಗ ಇಜಂಬಾರ್ಡ್ ಕಿಂಗ್‍ಡಮ್‍ನೊಂದಿಗೆ ಪ್ರಾರಂಭಿಸಿದ ಥೇಮ್ಸ್ ಸುರಂಗದ ಕೆಲಸ 1842ರಲ್ಲಿ ಪೂರ್ಣವಾಯಿತು. ನದೀತಳದುದ್ದಕ್ಕೂ 4 ಮೀಟರ್ ಕೆಳಗೆ 120 ಮೀಟರಿನಷ್ಟು ಸಾಗಿದ ಅದರ ಒಟ್ಟು ಉದ್ದ 480 ಮೀಟರ್. ರೈಲು ಸಾರಿಗೆಗೆ ಇದರಿಂದ ಬಹಳ ಅನುಕೂಲವಾಯಿತು.
(ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ